ಮಂಗಳೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಆಕಾಂಕ್ಷಾ ನಾಯರ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಧರ್ಮಸ್ಥಳದ ಬೊಳಿಯೂರು ನಿವಾಸಿ ಸುರೇಂದ್ರ ನಾಯರ್ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್ ನಾಯರ್ (22) ಶನಿವಾರ (ಮೇ.17) ರಂದು ಪಂಜಾಬ್ನ ಪಗ್ವಾರದ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಆಕಾಂಕ್ಷಾ ಅವರು ಇದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಎಂಬುವರನ್ನು ಪ್ರೀತಿಸುತ್ತಿದ್ದರು. ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಕೇರಳದ ಕೊಟ್ಟಾಯಂ ನಿವಾಸಿಯಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾರೆ. ಆಕಾಂಕ್ಷಾ ಪ್ರಾಧ್ಯಾಪಕ ಮ್ಯಾಥ್ಯೂ ಜೊತೆ ಅವರ ಮನೆಗೆ ಹೋಗಿ ಮದುವೆಯಾಗುವಂತೆ ಒತ್ತಾಯಿಸಿ ಜಗಳ ಮಾಡಿದ್ದರು.
ಬಳಿಕ ಆಕಾಂಕ್ಷಾ ಕಾಲೇಜಿನಲ್ಲೂ ಬಿಜಿಲ್ ಮ್ಯಾಥ್ಯೂ ಜೊತೆ ಜಗಳವಾಡಿದ್ದಾರೆ. ನಂತರ, ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಆರೋಪದಲ್ಲಿ ಮ್ಯಾಥ್ಯೂ ವಿರುದ್ಧ ಪಂಜಾಬ್ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಪಾನ್ನಲ್ಲಿ ಕೆಲಸ ಮಾಡುವ ಆಸೆ ಹೊಂದಿದ್ದ ಆಕಾಂಕ್ಷಾ ಕಳೆದ 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದ್ಯೋಗಕ್ಕಾಗಿ ಜಪಾನ್ಗೆ ಹೋಗಲು ಯೋಚಿಸಿದ್ದರು. ಈ ಹಿನ್ನೆಲೆಯಲ್ಲಿ, ಶನಿವಾರ (ಮೇ.19) ಕಾಲೇಜಿಗೆ ತೆರಳಿ ಸರ್ಟಿಫಿಕೇಟ್ಗಳನ್ನು ತೆಗೆದುಕೊಂಡು ಬರಲು ಹೋಗಿದ್ದರು. ಅಲ್ಲದೆ, ಸರ್ಟಿಫಿಕೇಟ್ ತೆಗೆದುಕೊಂಡಿರುವುದಾಗಿ ಪೋಷಕರಿಗೆ ಕರೆ ಮಾಡಿ ಆಕಾಂಕ್ಷಾ ತಿಳಿಸಿದ್ದರು.