ಕಾರ್ಕಳ: ಗಾಂಧೀಜಿಯವರು ಕಂಡ ಕನಸು ರಾಮ ರಾಜ್ಯ. ನನಸು ಮಾಡುವುದು ಯುವ ಜನತೆಯ ಜವಾಬ್ದಾರಿ. ಗಾಂಧೀಜಿಯವರು ‘ ಸತ್ಯಮೇವ ಜಯತೆ ‘ ಎಂಬ ತತ್ವದಂತೆ ಬಾಳಿದವರು, ಮಹಾನ್ ಸಾಧನೆಗೈದ ಮಹಾತ್ಮರು. ಅವರ ದೇಶಭಕ್ತಿ ನಮಗೆಲ್ಲ ಮಾದರಿ ಎಂದು ಶಿವ ಅಡ್ವಟೈಸರ್ಸ್ ಸಂಸ್ಥೆಯ ಮಾಲಕ ವರದರಾಯ ಪ್ರಭು ಹೇಳಿದರು.
ಅವರು ಅ.2 ರಂದು ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ನಡೆದ ಗಾಂಧಿ ಜಯಂತಿ ಆಚರಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯುವ ಜನತೆ ದೇಶ ಭಕ್ತರಾಗಿ, ದುಶ್ಚಟಗಳಿಂದ ದೂರವಿರಿ, ಆಂತರಿಕ ಸ್ವಚ್ಛತೆಯು ಬಹಳ ಮುಖ್ಯ. ಇದರಿಂದ ಆಂತರಿಕ ಶಕ್ತಿ ಹೆಚ್ಚುತ್ತದೆ. ಸಕಾರಾತ್ಮಕ ಚಿಂತನೆ ಮೂಡುತ್ತದೆ ಎಂದು ವಿದ್ಯಾರ್ಥಿನಿಯರಿಗೆ ಸಂದೇಶ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಉಷಾನಾಯಕ್ ಮಾತನಾಡಿ, ನಾವಿಂದು ನಡೆಸುತ್ತಿರುವ ನೆಮ್ಮದಿಯ ಜೀವನ ಹಲವು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಫಲ. ಭಾರತೀಯರಾಗಿ ಹುಟ್ಟಿದ ನಮ್ಮ ಜೀವನವನ್ನು ದೇಶ ಸೇವೆ ಮಾಡಿ ಸಾರ್ಥಕಗೊಳಿಸಬೇಕು. ಗಾಂಧೀಜಿಯವರು ಅಹಿಂಸಾ ತತ್ವದ ಪಾಲಕರು. ಅವರ ಆತ್ಮ ಚರಿತ್ರೆ ‘ ನನ್ನ ಸತ್ಯಾನ್ವೇಷಣೆ ‘ ಯನ್ನು ಓದಬೇಕು. ಹಿಂಸೆಯಿಂದ ದೂರವಿರಬೇಕು ಎಂದು ಹೇಳಿದರು. ದೈಹಿಕ ಶಿಕ್ಷಕಿ ಪ್ರಭಾವತಿ ಶೆಟ್ಟಿ ಹಾಗೂ
ಎನ್ಎಸ್ಎಸ್ ಘಟಕದ ನಾಯಕಿಯರಾದ ಅನನ್ಯ, ಅಮೂಲ್ಯ, ನಯನ ಹಾಗೂ ಲಾವಣ್ಯ ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ಅನ್ವಿತಾ ಮಲ್ಯ ಅತಿಥಿಗಳ ಪರಿಚಯ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಚೈತ್ರ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.