Share this news

 

 

 

ಬೆಂಗಳೂರು : ಜಾತಿ ಗಣತಿ ಹೆಸರಿನಲ್ಲಿ ಸಿಎಂ‌ ಸಿದ್ದರಾಮಯ್ಯ ಇಡೀ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, 350 ಕ್ಕೂ ಹೆಚ್ಚು ದುರ್ಬಲ ಹಿಂದುಳಿದ ಜಾತಿಗಳ ಜತೆಗೆ ಸಿಎಂ ಪ್ರತಿನಿಧಿಸುವ ಕುರುಬ ಸಮುದಾಯವನ್ನು ಪ್ರವರ್ಗ 1ಬಿ ಯಲ್ಲಿ ಸೇರಿಸಿಕೊಂಡಿದ್ದು ,ಇದು ಅತೀ ಹಿಂದುಳಿದ ಜಾತಿಗಳ ಜನರಿಗೆ ಮಾಡಿದ ದ್ರೋಹವಾಗಿದೆ.ಇದಲ್ಲದೇ ಸುಮಾರು 400 ಕ್ಕೂ ಹೆಚ್ಚು ಹಿಂದುಳಿದ ಜಾತಿಗಳ ಜನರಿಗೆ ಈವರೆಗೂ ಗ್ರಾಮ ಪಂಚಾಯತಿ ಸದಸ್ಯರಾಗಲು ಸಾದ್ಯವಾಗಿಲ್ಲ,ಪ್ರವರ್ಗ 1ಬಿ ಯಲ್ಲಿ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವ ಮೂಲಕ ೪೩ ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಜತೆಗೆ ಇವರು ಸ್ಪರ್ಧೆ ಮಾಡಲು ಸಾಧ್ಯವೇ ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.

ಅತಿ ಹಿಂದುಳಿದ ಸಮಾಜಗಳನ್ನು ಜಾತಿ ಗಣತಿ ವರದಿ ಪ್ರಪಾತಕ್ಕೆ ತಳ್ಳಿದೆ.1ಬಿ ಪ್ರವರ್ಗ ಸೃಷ್ಟಿಸಿ ಸಣ್ಣ ಜಾತಿಗಳಿಗೆ ಏನು ನ್ಯಾಯ ಕೊಡ್ತೀರಿ? ಪ್ರವರ್ಗ 2ಎ ನಲ್ಲಿರುವ ಉಳಿದ ಜಾತಿಗಳನ್ನು ಬಿಟ್ಟು ಒಂದೇ ಸಮುದಾಯವನ್ನು 1ಬಿ ಗೆ ಹಾಕಿದ್ದೀರಿ. ಇದು ಅವೈಜ್ಞಾನಿಕವಾಗಿದೆ.ಇದರಲ್ಲಿ ರಾಜಕೀಯ ದುರುಪಯೋಗ ಸ್ಪಷ್ಟವಾಗಿ ಕಂಡುಬರುತ್ತಿದೆ.ಜನಸಂಖ್ಯೆ ಕಡಿಮೆ ಆಗಿದೆ ಅನ್ನೋದಕ್ಕಿಂತ ಹಿಂದುಳಿದ ವರ್ಗಗಳಿಗೆ ಈ ವರದಿ ದೊಡ್ಡ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಕೇಂದ್ರದಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಘೋಷ ವಾಕ್ಯದಲ್ಲಿ ಎಲ್ಲಾ ಸಮುದಾಯಕ್ಕೂ ಜನಪರ ಕಾರ್ಯಕ್ರಮ ಕೊಡುತ್ತಿದೆ. ಆದರೆ ಸಿದ್ದರಾಮಯ್ಯ ಈ ಜಾತಿ ಜನಗಣತಿ ಮೂಲಕ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ಎಂಬ ಘೋಷಣೆಯ ಮೂಲಕ ಸಮಾಜ ವಿಭಜನೆಗೆ ಮುಂದಾಗಿದ್ದಾರೆ. ಈ ವರದಿ ಸ್ವತಃ ಸಿದ್ದರಾಮಯ್ಯ ಅವರೇ ಬರೆಸಿರುವ ಅನುಮಾನ ದಟ್ಟವಾಗಿದೆ.ಸರಕಾರ ಯೋಜನೆಗೆ ಜಾತಿ ಜನಗಣತಿ ಮಾಡಬೇಕೇ ಹೊರತು ವಿಭಜನೆಗೆ ಮಾಡಬಾರದು,ಈ ವರದಿಯ ಮೂಲಕ ಸಾಕಷ್ಟು ಗೊಂದಲ ಮೂಡಿಸಲಾಗುತ್ತಿದೆ. ಹಿಂದುಳಿದ ಸಮಾಜಗಳಿಗೆ ಈ ವರದಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದರು.

ಕಾಂತರಾಜು ಅವರ ಮೂಲ ವರದಿಯೇ ಇಲ್ಲವೆಂದಾದರೆ ಜಯಪ್ರಕಾಶ್ ಹೆಗ್ಡೆ ಈ ವರದಿ ಯಾವ ಆಧಾರದಲ್ಲಿ ಸಿದ್ದಪಡಿಸಿದರು? ಆ ವರದಿ ಸಿಗದೇ ಈ ವರದಿ ಹೇಗೆ ತಯಾರು ಮಾಡಲು ಸಾಧ್ಯ? ಕಾಂತರಾಜು ವರದಿ ನಿಮಗೆ ರಾಜಕೀಯ ಲಾಭ ತರಲಿಲ್ಲ ಎಂದು ಆ ವರದಿ ಎಲ್ಲಿಟ್ಟಿದ್ದೀರಿ?ಒಟ್ಟಾರೆ ಮೀಸಲಾತಿ ಈಗ 85% ಕ್ಕೆ ಏರಿಸುವುದಾಗಿ ವರದಿಯಲ್ಲಿ ಹೇಳಿದ್ದಾರೆ.ಬಿಹಾರದಲ್ಲಿ 65% ಕ್ಕೆ ಮೀಸಲಾತಿ ಹೆಚ್ಚಿಸಲು ಕೋರ್ಟ್ ಒಪ್ಪಿಲ್ಲ,ಇನ್ನು ಇಲ್ಲಿ ಹೇಗೆ 85% ಕ್ಕೆ ರಾಜ್ಯದ ಮೀಸಲಾತಿ ಕೊಡೋಕ್ಕೆ ಸಾಧ್ಯ? ಎಂದು ಸುನಿಲ್ ಪ್ರಶ್ನಿಸಿದರು.

ವರದಿ ವೈಜ್ಞಾನಿಕವಾಗಿಲ್ಲ. ಸಂವಿಧಾನಕ್ಕೆ ನಿಷ್ಠೆ ತೋರುವಲ್ಲಿ ಈ ವರದಿ ವಿಫಲ ಆಗಿದೆ. ಯಾವುದೇ ಜಾತಿಯ ನಿಖರ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ವಿಶೇಷ ಅಧಿವೇಶನ ಕರೆದು ಈ ವರದಿ ಬಗ್ಗೆ ಸರ್ಕಾರ ಚರ್ಚಿಸಬೇಕೆಂದು ಸುನಿಲ್ ಒತ್ತಾಯಿಸಿದರು.

 

 

 

 

 

 

 

 

Leave a Reply

Your email address will not be published. Required fields are marked *