ಕಾರ್ಕಳ: ಮಳೆಗಾಲದಲ್ಲಿ ಸಂಭವಿಸಿಬಹುದಾದ ಪ್ರಾಕೃತಿಕ ವಿಕೋಪ ಹಾಗೂ ಮಲೇರಿಯಾ ನಿಯಂತ್ರಣ ಕುರಿತು ಕಾರ್ಕಳ ಪುರಸಭಾಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪುರಸಭಾ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಅಧ್ಯಕ್ಷರು ಪ್ರಸ್ತಾಪಿಸಿದರು. ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಮಾತನಾಡಿ, ಪ್ರಸ್ತುತ ತಾಲೂಕು ಆಸ್ಪತ್ರೆಯಲ್ಲಿ 2 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಆದರೆ ಖಾಸಗಿ ಆಸ್ಪತ್ರೆಗಳ ಡೆಂಗ್ಯೂ ಪ್ರಕರಣದ ವಿವರಗಳು ಬಂದಿಲ್ಲ ಎಂದರು.
ಮಲೇರಿಯಾ ಹಾಗೂ ಡೆಂಗ್ಯೂ ಕುರಿತು ಎಲ್ಲಾ ಶಾಲಾ ಕಾಲೇಜುಗಳಿಗೆ ಪರಿಸರ ಅಭಿಯಂತರರು ಮತ್ತು ಹಿರಿಯ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಅಲ್ಲದೇ ಪುರಸಭಾ ವತಿಯಿಂದ ಕರಪತ್ರಗಳನ್ನು ಮುದ್ರಿಸಿ ಅದನ್ನು ಆಶಾ ಕಾರ್ಯಕರ್ತರ ಮೂಲಕ ಸಾರ್ವಜನಿಕರಿಗೆ ವಿತರಿಸಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.ಇದಲ್ಲದೇ ಹೊರ ರಾಜ್ಯದಿಂದ ಬರುವ ಕಟ್ಟಡ ಕಾರ್ಮಿಕರಿಗೆ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪುರಸಭಾ ವತಿಯಿಂದ ಪರವಾನಿಗೆ ನೀಡುವ ಪೂರ್ವದಲ್ಲಿ ಕಾರ್ಮಿಕರನ್ನು ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಸೂಚನೆ ನೀಡಬೇಕೆಂದು ಸೂಚಿಸಿದರು.
ಪುರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಈಗಾಗಲೇ ಪುರಸಭೆ ವತಿಯಿಂದ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮರಗಳನ್ನು ತೆರವುಗೊಳಿಸಬೇಕು ಅಧ್ಯಕ್ಷರು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಶಾಂತ ಕೋಟ್ಯಾನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರದೀಪ್ ರಾಣೆ,ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್, ಇಂಜಿನಿಯರ್ ರೇಣುಕಾ ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು