ಕಾರ್ಕಳ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ169ರಲ್ಲಿನ ಸಾಣೂರು ಮುರತ್ತಂಗಡಿಯ ಗುಡ್ಡದಲ್ಲಿ ಹಾದುಹೋಗಿರುವ ಹೈ ಟೆನ್ಶನ್ ವಿದ್ಯುತ್ ಗೋಪುರ ಹೆದ್ದಾರಿ ಕಾಮಗಾರಿಯಿಂದ ಗುಡ್ಡದ ಮಣ್ಣು ಜರಿಯುತ್ತಿದ್ದ ಪ್ರದೇಶಕ್ಕೆ ಇದೀಗ ಹೆದ್ದಾರಿ ಇಲಾಖೆ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.
ಕಳೆದ ಎರಡು ಮಳೆಗಾಲದ ಸಂದರ್ಭದಲ್ಲಿ ತೀರಾ ಅಪಾಯಕಾರಿ ಸ್ಥಿತಿಯಲ್ಲಿದ್ದ ಟವರ್ ಕುಸಿಯುವ ಭೀತಿ ಎದುರಾಗಿತ್ತು.
ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅಪಾಯಕಾರಿ ಸ್ಥಳಕ್ಕೆ ಭೇಟಿ ನೀಡಿ ತಡೆಗೋಡೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಸಲ್ಲಿಸಿ ಅನುಮೋದನೆ ಪಡೆಯುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿದ್ದರು.
ಪತ್ರಿಕೆ , ದೃಶ್ಯ ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾ ಗಳಲ್ಲಿ ಹೆದ್ದಾರಿ ಇಲಾಖೆಯವರ ನಿರ್ಲಕ್ಷದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒಂದು ಪಾರ್ಶ್ವದ ರಸ್ತೆ ಸಂಚಾರ ಬಂದ್ ಮಾಡಿತ್ತು.
ನಿರಂತರ ಮಳೆಯ ಕಾರಣದಿಂದಾಗಿ ಕಾಮಗಾರಿಯನ್ನು ಕೈಗೊಳ್ಳಲು ಅಡ್ಡಿಯಾಗಿತ್ತು.ಸಾರ್ವಜನಿಕರ ಹೋರಾಟದ ಮೇರೆಗೆ ಇದೀಗ ಮಳೆಗಾಲ ಕಳೆದು ಎರಡು ತಿಂಗಳ ಬಳಿಕ ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಚ್ಚೆತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಇದರಿಂದ ಗ್ರಾಮಸ್ಥರು ಹಾಗೂ ವಾಹನ ಸವಾರರು ನಿರಾಳರಾಗಿದ್ದಾರೆ.