ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿದ್ದಾರೆ ಮತ್ತು 47 ಜನರು ಗಾಯಗೊಂಡಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ವಿಪಕ್ಷ ನಾಯಕ ಆರ್ ಅಶೋಕ್ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಸಂಭ್ರಮಿಸಬೇಕಾದ ಘಳಿಗೆಯನ್ನು ಸೂತಕದ ಗಳಿಗೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿವೇಚನಾ ರಹಿತ ದುರಾಡಳಿತ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈ ದುರ್ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಆರ್‌ಸಿಬಿ ತಂಡ ಚಾಂಪಿಯನ್ ಪಟ್ಟ ಗೆದ್ದ ಸಾಧನೆಯಲ್ಲಿ ತಾನು ಕ್ರೆಡಿಟ್ ಪಡೆಯಬೇಕು ಎನ್ನುವ ಆತರದಲ್ಲಿ ಸರಿಯಾದ ಪೂರ್ವ ಸಿದ್ಧತೆ ಇಲ್ಲದೆ, ಯೋಜನೆ ಇಲ್ಲದೆ ಪೊಲೀಸರಿಗೆ ಕಾಲಾವಕಾಶ ಕೊಡದೆ ಅಭಿನಂದನಾ ಸಮಾರಂಭ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈ ಅನಾಹುತಕ್ಕೆ ಕಾರಣ. ಐಪಿಎಲ್ ಪಂದ್ಯಾವಳಿಯ ಫೈನಲ್ ಮ್ಯಾಚ್ ರಾತ್ರಿಯಷ್ಟೇ ಮುಗಿದಿದ್ದು ನಗರದಾದ್ಯಂತ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವಲ್ಲಿ ನಿರತರಾಗಿದ್ದ ಪೊಲೀಸ್ ಸಿಬ್ಬಂದಿಗೆ ಬೆಳಿಗ್ಗೆ ಏಕಾಏಕಿ ಮತ್ತೊಮ್ಮೆ ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿ ಎಂದರೆ ಅದು ಕಷ್ಟ ಸಾಧ್ಯ ಎನ್ನುವ ಕನಿಷ್ಠ ಪರಿಜ್ಞಾನ ಇಲ್ಲದಿರುವುದು ಸರ್ಕಾರದ ಸ್ಪಷ್ಟ ವೈಫಲ್ಯ ಹಾಗೂ ಬೇಜವಾಬ್ದಾರಿತನ.
ಕಾಲ್ತುಳಿತದಿಂದ ಉಂಟಾದ ಸಾವುಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊತ್ತು ಮೃತರ ಕುಟುಂಬಗಳಿಗೆ 25 ಲಕ್ಷ ಪರಿಹಾರ ನೀಡಬೇಕು ಮತ್ತು ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ.