
ಬೆಂಗಳೂರು,ಜೂ08: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಎಪಿಎಲ್ ಕುಟುಂಬಗಳಿಗೂ ಹೆಚ್ಚಿನ ಸರ್ಕಾರಿ ನೆರವು ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ಬಿಪಿಎಲ್ ಕಾರ್ಡುದಾರರಿಗೆ ಈಗಾಗಲೇ ಸಂಪೂರ್ಣ ಉಚಿತ ಚಿಕಿತ್ಸೆ ಸೌಲಭ್ಯ ಲಭ್ಯವಿದೆ. ಪ್ರಸ್ತುತ ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ ಸರ್ಕಾರದ ಪಾಲು ಚಿಕಿತ್ಸಾ ವೆಚ್ಚದ 30 ಶೇಕಡ ಇದ್ದು, ಅದನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ಇದೆ ಎಂದರು. ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ಶೇ.70 ರಷ್ಟು ಸರ್ಕಾರದ ಪಾಲು ಇತ್ತು. ಇದೀಗ ಮತ್ತೆ ಅದನ್ನು ಜಾರಿಗೆ ತರುವ ಚಿಂತನೆ ನಡೆಸಲಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಬಿಪಿಎಲ್ ಕುಟುಂಬದವರು ಯೋಜನೆಯಡಿ ಚಿಕಿತ್ಸೆ ಪಡೆದಾಗ ಯಾವುದೇ ಖಾಸಗಿ ಆಸ್ಪತ್ರೆಯು ರೋಗಿಯಿಂದ ಹಣ ಪಡೆಯಲು ಅವಕಾಶವಿಲ್ಲ. ಹಣ ಕೇಳಿದರೆ ಆರೋಗ್ಯ ಮಿತ್ರರ ಮೂಲಕ ದೂರು ನೀಡಬಹುದು. ಅಂತಹ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ಹಲವು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದು, ವೈದ್ಯರ ಸಂಖ್ಯೆಯೂ ಹೆಚ್ಚಾಗಿದೆ. ಆದಾಗ್ಯೂ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬಾರದಿರುವುದು ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಹೆಚ್ಚುವರಿ ಆರ್ಥಿಕ ಪ್ರೋತ್ಸಾಹ ನೀಡುವ ಚಿಂತನೆ ಇದೆ ಎಂದು ಸಚಿವರು ಹೇಳಿದರು.


.
.
.
.
.
.
.
.
.
.
.
.
.
.
.
.
.
.
.
.
