
ಬೆಂಗಳೂರು,ಜೂ.08: ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ರೌಡಿಸಂ ಹಾಗೂ ಸಮಾಜವಿರೋಧಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಕರ್ನಾಟಕ ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾಗಿದೆ. ಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ತೀರ್ಮಾನದ ಬೆನ್ನಲ್ಲೇ, ರಾಜ್ಯದಾದ್ಯಂತ ವೃತ್ತ (ಸರ್ಕಲ್) ಹಾಗೂ ಪೊಲೀಸ್ ಠಾಣಾ ಮಟ್ಟದಲ್ಲಿ ವಿಶೇಷ “ಆಂಟಿ ರೌಡಿ ಸ್ಕ್ವಾಡ್” (ರೌಡಿ ನಿಗ್ರಹ ದಳ)ಗಳನ್ನು ರಚಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಮಾಜಘಾತುಕ ಶಕ್ತಿಗಳು, ರೌಡಿಶೀಟರ್ಗಳು ಮತ್ತು ಅಪರಾಧಿ ಗುಂಪುಗಳ ವಿರುದ್ಧ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದೆ.
ವಿಶೇಷವಾಗಿ ನಗರ ಪ್ರದೇಶಗಳ ಜೊತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿಯೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಸ್ಕ್ವಾಡ್ಗಳು ಕಾರ್ಯನಿರ್ವಹಿಸಲಿವೆ.
ಹೊಸ ಆದೇಶದ ಪ್ರಕಾರ, ಪ್ರತಿ ಪೊಲೀಸ್ ವಲಯದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ರೌಡಿ ಸ್ಕ್ವಾಡ್ ಕಾರ್ಯನಿರ್ವಹಿಸಲಿದೆ. ಅದೇ ರೀತಿ, ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸ್ ಠಾಣೆಗಳಲ್ಲಿಯೂ ಪ್ರತ್ಯೇಕ ಠಾಣೆ ಮಟ್ಟದ ಸ್ಕ್ವಾಡ್ ರಚಿಸಲಾಗುತ್ತದೆ.
ಸ್ಥಳೀಯ ಅಪರಾಧ ಪರಿಸ್ಥಿತಿಯನ್ನು ಆಧರಿಸಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (SDPO) ಅಥವಾ ಸಹಾಯಕ ಪೊಲೀಸ್ ಆಯುಕ್ತರು (ACP) ಸ್ಕ್ವಾಡ್ ಸದಸ್ಯರ ಸಂಖ್ಯೆಯನ್ನು ಹಾಗೂ ರಚನೆಯನ್ನು ನಿರ್ಧರಿಸಲಿದ್ದಾರೆ.
ಈ ಸ್ಕ್ವಾಡ್ಗಳ ಪ್ರಮುಖ ಜವಾಬ್ದಾರಿಗಳಲ್ಲಿ ರೌಡಿಶೀಟರ್ಗಳ ಗುರುತಿಸುವಿಕೆ, ಅವರ ಚಟುವಟಿಕೆಗಳ ಮೇಲ್ವಿಚಾರಣೆ, ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆ ಮತ್ತು ಅಗತ್ಯವಿದ್ದಲ್ಲಿ ಹೊಸ ರೌಡಿಶೀಟ್ ತೆರೆಯುವುದು ಸೇರಿದೆ. ಜೊತೆಗೆ ಅಪರಾಧಿ ಗ್ಯಾಂಗ್ಗಳ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸಿ, ಸಮಾಜಘಾತುಕ ವ್ಯಕ್ತಿಗಳ ಮೇಲೆ ನಿರಂತರ ನಿಗಾ ಇರಿಸುವ ಕೆಲಸವನ್ನು ಕೂಡ ಸ್ಕ್ವಾಡ್ ನಿರ್ವಹಿಸಲಿದೆ.


.
.
.
.
.
.
.
.
.
.
.
.
.
.
.
.
.
.
.
.
