ಚಿತ್ರ ಕೃಪೆ: ಉಷಾ ಡಿಜಿಟಲ್ಸ್, ಕೆರ್ವಾಶೆ
ಕಾರ್ಕಳ:ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಜನರ ಬಳಿ ಹೋಗಿ ಸೇವೆ ಕೊಡುವ ಕ್ಷೇತ್ರ. ಹಳ್ಳಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ಜನರ ಜೀವನ ಮಟ್ಟ ಸುಧಾರಿಸಿದೆ ಎಂದು ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು
ಅವರು ಮೇ 17 ರಂದು ಶನಿವಾರ ಮಾಳ-ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಕೆರ್ವಾಶೆ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಗ್ರಾಮೀಣ ಭಾಗದ ಜನರು ಯಾವುದೇ ಸಾಲ ಬೇಕಿದ್ದರೂ ಸಹಕಾರಿ ಸಂಘಗಳಲ್ಲಿ ಸಾಲ ಮಂಜೂರಾತಿ ಮಾಡಲಾಗುತ್ತದೆ. ಸಹಕಾರಿ ಕ್ಷೇತ್ರ ಜನರ ಬಳಿ ಹೋಗಿ ಸೇವೆ ಕೊಡುವ ಕ್ಷೇತ್ರ. ಹಳ್ಳಿ ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆದು ಜನರ ಜೀವನ ಮಟ್ಟ ಸುಧಾರಿಸಿದೆ ಎಂದರು.ಪ್ರಮುಖವಾಗಿ ಗ್ರಾಮೀಣ ಭಾಗದ ಮಹಿಳೆಯರು ಸಹಕಾರ ಸಂಘಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.ಮಾಳ ವ್ಯವಸಾಯ ಸೇವಾ ಸಂಘವು ಸಾಲ ವಸೂಲಾತಿಯಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಿರುವುದನ್ನು ಅಭಿನಂದಿಸಿದರು. ನಾನು ಕಳೆದ 40 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಸಹಕಾರಿ ಕ್ಷೇತ್ರವನ್ನು ಸದೃಢಗೊಳಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು.
ಉದ್ಯಮಿ ಮುನಿಯಾಲು ಉದಯ ಶೆಟ್ಟಿ ಸಂಘದ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ,ಸಹಕಾರಿ ಧುರೀಣ ಎಂಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿ ಸಂಘಗಳು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಅವರ ಅವಿರತ ಶ್ರಮವೇ ಕಾರಣ ಎಂದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಗಣಕ ಯಂತ್ರ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ,ರಾಷ್ಟ್ರೀಕೃತ ಬ್ಯಾಂಕುಗಳು ಹಳ್ಳಿಯಿಂದ ತಮ್ಮ ಶಾಖೆಗಳನ್ನು ಮುಚ್ಚಿ ಪಟ್ಟಣಕ್ಕೆ ಹೋಗುತ್ತಿವೆ,ಆದರೆ ಸಹಕಾರಿ ಸಂಘಗಳು ಗ್ರಾಮೀಣ ಭಾಗದಲ್ಲಿ ತಮ್ಮ ಶಾಖೆಗಳನ್ನು ತೆರೆದು ಮಹಿಳೆಯರು ಹಾಗೂ ರೈತರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿವೆ,ಆದ್ದರಿಂದ ನಾವೆಲ್ಲರೂ ಸಹಕಾರಿ ಕ್ಷೇತ್ರವನ್ನು ಬಲಪಡಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ SSLC ಪರೀಕ್ಷೆಯಲ್ಲಿ 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರಕೃತಿ ಗುಡಿಗಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ನವೀನ್ ಎಂ, ಸುವರ್ಣ ಅವರನ್ನು ಪ್ರಾಮಾಣಿಕ ಸೇವೆಗಾಗಿ ಹಾಗೂ ಶೇ 100ರ ಸಾಲ ವಸೂಲಾತಿ ಸಾಧನೆಗಾಗಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪಿಎಲ್ ಡಿ ಬ್ಯಾಂಕ್ ಅದ್ಯಕ್ಷ ಅಶೋಕ್ ಕುಮಾರ್ ಬಳ್ಳಾಲ್,ಕೆರ್ವಾಶೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನೀತಾ ಪೂಜಾರಿ, ನವೋದಯ ಗ್ರಾಮ ವಿಕಾಸ ಚಾರಿಟಬಲ್ ನಿರ್ದೇಶಕ ಸುನಿಲ್ ಕುಮಾರ್ ಬಜಗೋಳಿ, ಸುಧಾಕರ ಶೆಟ್ಟಿ ಮುಡಾರು, ಸಂಘದ ಉಪಾಧ್ಯಕ್ಷ ನಾಗೇಶ್ ಭಂಡಾರಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಸ್ವಾಗತಿಸಿ, ಸಂಘದ ನಿರ್ದೇಶಕ ವೆಂಕಟೇಶ ಗೋರೆ ವಂದಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ. ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘ ಬೆಳೆದು ಬಂದ ಕುರಿತು ಸ್ಥೂಲವಾಗಿ ವಿವರಿಸಿದರು.